ಎಸ್‌ಟಿಗಾಗಿ ಹಾಲಕ್ಕಿಗಳಿಂದ ಹೋರಾಟ


ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಜ.25 ರಂದು ಪದ್ಮಶ್ರೀ ಪುರಷ್ಕೃತರಾದ ಸುಕ್ರಿ ಗೌಡ ಹಾಗೂ ತುಳಸಿ ಗೌಡ ಅವರ ನೇತೃತ್ವದಲ್ಲಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಧರಣಿ ನಡೆಸಲಾಗುತ್ತದೆ ಎಂದು ವಿನಾಯಕ ಗೌಡ ಹೇಳಿದರು.


ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕಳೆದ 30 ವರ್ಷಗಳಿಂದ ಬೇಡಿಕೆ ಇಡುತ್ತಿದ್ದೇವೆ. ಸೀಬರ್ಡ್ ನೌಕಾನೆಲೆ, ಕದ್ರಾ ಯೋಜನೆಯಿಂದಲೂ ನಿರಾಶ್ರಿತರಾಗಿದ್ದಾರೆ. ಹೊನ್ನಳ್ಳಿ ಕಿಂಡಿ ಆಣೆಕಟ್ಟು, ಅಲಗೇರಿ ವಿಮಾನ ನಿಲ್ದಾಣ, ಕುಮಟಾ ರಾಷ್ಟಿಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಿಂದಲೂ ಸಮಾಜದ ಹಲವು ನಿರಾಶ್ರಿತರಾಗುತ್ತಿದ್ದಾರೆ. ಸಮುದಾಯದವರು ಇರುವ ಊರುಗಳಿಗೆ ಈಗಲೂ ಸರಿಯಾದ ರಸ್ತೆ, ವಿದ್ಯುತ್ ಸಂಪರ್ಕ ಇಲ್ಲ. ಸಮುದಾಯ ತೀರಾ ಹಿಂದುಳಿದಿದೆ. ಹಾಗಾಗಿ ಸಮಾನ ಮನಸ್ಕರು ಸೇರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಸಮಾಜದ ಪ್ರಮುಖ ಮೋಹನದಾಸ ಗೌಡ ಮಾತನಾಡಿ, ಹಾಲಕ್ಕಿ ಒಕ್ಕಲಿಗರು ಕೊಂಕಣ ರೈಲ್ವೆಯಿಂದಲೂ ನಿರಾಶ್ರಿತರಾಗಿದ್ದಾರೆ. ಜಮೀನು ಕಳೆದುಕೊಂಡವರಿಗೆ ಇನ್ನೂ ಸರಿಯಾಗಿ ಪರಿಹಾರ ಬಂದಿಲ್ಲ. ಈಗಿನ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆಯನ್ನು ಸ್ವಾಗತಿಸುತ್ತೇವೆ. ಆದರೆ ಅದರಿಂದ ನಿರಾಶ್ರಿತರಾಗುವವರಿಗೆ ಪರಿಹಾರ ಏನು ಎನ್ನುವುದನ್ನೂ ನೋಡಬೇಕು. ಯೋಜನೆ ಬರಲಿ, ಪರಿಹಾರವೂ ಸರಿಯಾಗಿ ಆಗಲಿ ಎಂದರು.
ಹೊನ್ನಳ್ಳಿಯಲ್ಲಿ ಕಿಂಡಿ ಅಣೆಕಟ್ಟು ಯೋಜನೆ ತಯಾರಿ ನಡೆದಿದೆ. ಭೂಸ್ವಾಧೀನ ಪ್ರದೇಶದಲ್ಲಿ 10 ಗುಂಟೆಗಿಂತ ಮೇಲ್ಪಟ್ಟು ಭೂಮಿ ಹೊಂದಿದವರಿಲ್ಲ. ಭೂ ಸ್ವಾಧೀನ ಬಳಿಕ ಅವರಿಗೆ ಪುನರ್ವಸತಿ ಎಲ್ಲಿ ಮಾಡುತ್ತೀರಿ ಎಂಬುದನ್ನು ಈವರೆಗೆ ಯಾರೂ ಸ್ಪಷ್ಟಪಡಿಸಿಲ್ಲ. ಈ ಯೋಜನೆಗಳಿಗೆಲ್ಲ ಹಾಲಕ್ಕಿಗಳಷ್ಟೇ ಅಲ್ಲ, ಎಲ್ಲಾ ಸಮುದಾಯದವರೂ ನಿರಾಶ್ರಿತರಗಾರುತ್ತಾರೆ ಎಂದರು.
ಮಾರುತಿ ಗೌಡ, ಡಿಂಗಾ ಗೌಡ, ಅರುಣ ಗೌಡ, ಮೋಹನದಾಸ ಗೌಡ, ಗಣೇಶ್ ಗೌಡ, ರಮಾಕಾಂತ ಗೌಡ, ರಾಜೇಶ್ ಗೌಡ, ಹರೀಶ್ ಗೌಡ ಬೆಳಂಬರ, ಯಶ್ವಂತ ಗೌಡ ಇದ್ದರು.

Leave a comment

This site uses Akismet to reduce spam. Learn how your comment data is processed.